ನಾಗೋಜಿ ಭಟ್ಟ
	ಸು. 18 ನೆಯ ಶತಮಾನ. ಮಹಾರಾಷ್ಟ್ರದ ಸಂಸ್ಕøತ ಪಂಡಿತ. ಈತನನ್ನು ನಾಗೇಶ ಭಟ್ಟ ಎಂದೂ ಕರೆಯಲಾಗಿದೆ. ಈತ ಭಟ್ಟೋಜೀ ದೀಕ್ಷಿತನ ಮೊಮ್ಮಗ ಹರಿ ದಿಕ್ಷೀತನ ಶಿಷ್ಯ. ಈತನಿಗೆ ಉಪಾಧ್ಯಾಯ ಎಂಬ ಪ್ರಶಸ್ತಿ ಇತ್ತು. ಕಾಶೀನಿವಾಸಿಗಳಾದ ಬ್ರಾಹ್ಮಣ ಮನೆತನದ ಸತೀದೇವಿ. ಶಿವಭಟ್ಟ ಈತನ ತಂದೆತಾಯಿಯರು. ಈತ ಪ್ರಯಾಗದ ಪ್ರಾಂತದಲ್ಲಿದ್ದ ಶೃಂಗವೇರಪುರದ ರಾಜನಾದ ರಾಮಸಿಂಹನ ಆಶ್ರಯದಲ್ಲಿದ್ದನೆಂದೂ ಜಯಪುರದ ಸವಾಯಿ ಜಯಸಿಂಹ 1714ರಲ್ಲಿ ಆಚರಿಸಿದ ಅಶ್ವಮೇಧಯಾಗಕ್ಕೆ ಈತನನ್ನು ಅಹ್ವಾನಿಸಿದನೆಂದು ಆಗ ಕ್ಷೇತ್ರಸಂನ್ಯಾಸವನ್ನು ತಳೆದಿದ್ದ ಈತ ಆಹ್ವಾನವನ್ನು ಮನ್ನಿಸಲಾಗಲಿಲ್ಲವೆಂದೂ ಕೊನೆಗೆ ಈತ ತುಂಬಾ ಮುದುಕನಾಗಿ ಕಾಶಿಯಲ್ಲಿ 1775ರಲ್ಲಿ ದೇಹವನ್ನು ತ್ಯಜಿಸಿದನೆಂದೂ ಇತಿಹಾಸದಿಂದ ತಿಳಿದುಬರುತ್ತದೆ.

ಈತ ಧರ್ಮಶಾಸ್ತ್ರ, ಯೋಗಶಾಸ್ತ್ರ ಮತ್ತು ಅಲಂಕಾರಶಾಸ್ತ್ರಗಳ ಮೇಲೆ ಸುಮಾರು 14 ಗ್ರಂಥಗಳನ್ನೂ ವ್ಯಾಕರಣ ಶಾಸ್ತ್ರದಲ್ಲಿ 12 ಗ್ರಂಥಗಳನ್ನೂ ಬರೆದಿರುವುದಾಗಿಯೂ ತಿಳಿದುಬಂದಿದೆ. ಧರ್ಮಶಾಸ್ತ್ರದಲ್ಲಿ ಈತನ ಅಶೌಚನಿರ್ಣಯ ಎಂಬ ಗ್ರಂಥ ಸುಪ್ರಸಿದ್ದವಾಗಿದೆ. ವಾಲ್ಮೀಕಿ ರಾಮಾಯಣ, ಆಧ್ಯಾತ್ಮ ರಾಮಾಯಣ, ಸಪ್ತಶತಿ, ಗೀತಗೋವಿಂದ, ಸುಧಾಲಹರಿ ಇವುಗಳ ಮೇಲೆ ವ್ಯಾಖ್ಯಾನ ಗ್ರಂಥಗಳನ್ನೂ ಬರೆದಿರುವುದಾಗಿ ತಿಳಿದುಬಂದಿದೆ. ಅವುಗಳಲ್ಲಿ ಈಗ ಉಪಲಬ್ಧವಿರುವ ಗ್ರಂಥಗಳೆಂದರೆ ಮಹಾಭಾಷ್ಯಪ್ರದೀಪೋದ್ಯೋತ, ಮಂಜೂಷಾ, ಲಘುಮಂಜೂಷಾ, ಪರಮಲಘೂಮಂಜೂಷಾ, ಶಬ್ದೇಂದುಶೇಖರ, ಲಘುಶಬ್ದೇಂದುಶೇಖರ, ಪರಿಭಾಷೇಂದುಶೇಖರ, ಸ್ಫೋಟವಾದ, ಕಾವ್ಯಪ್ರಕಾಶ ವ್ಯಾಖ್ಯಾನ, ರಸಗಂಗಾಧರವ್ಯಾಖ್ಯಾ, ದೇವೀಮಾಹಾತ್ಮಾವ್ಯಾಖ್ಯಾ, ಪಾತಾಂಜಲಯೋಗಸೂತ್ರವೃತ್ತಿ. ಇವುಗಳಲ್ಲಿ ಕೈಯಟನ ಮಹಾಭಾಷ್ಯಾಪ್ರದೀಪಕ್ಕೆ ವ್ಯಾಖ್ಯಾನ ರೂಪವಾಗಿರುವ ಉದ್ಯೋತವೆಂಬುವುದು ಅತಿಮುಖ್ಯವಾದುದು. ಪರಿಭಾಷೇಂದು ಶೇಖರ ಪಾಣಿನಿವ್ಯಾಕರಣಕ್ಕೆ ಸಂಬಂಧಿಸಿದ ಪರಿಭಾಷೆಗಳ ಸಂಗ್ರಹರೂಪವಾಗಿದೆ. ಮಹಾಭಾಷ್ಯಾವಾರ್ತಿಕಗಳಿಂದ ಸಂಗ್ರಹಿಸಿದ 133 ಪರಿಭಾಷೆಗಳನ್ನು ಈತ ಪರಿಭಾಷೇಂದುಶೇಖರದಲ್ಲಿ ವಿವರಿಸಿದ್ದಾನೆ. ಶಬ್ದೇಂದುಶೇಖರದಲ್ಲಿ ಸಿದ್ಧಾಂತಕೌಮುದಿಗೆ ಸ್ವತಂತ್ರವಾದ ವ್ಯಾಖ್ಯಾನವಾಗಿದೆ. ಮಂಜೂಷಾ, ಲಘುಮಂಜೂಷಾ, ಪರಮಲಘುಮಂಜೂಷಾ- ಇವು ಮೂರು ವಿಚಾರ ಗ್ರಂಥಗಳು ಅರ್ಥವಿಚಾರವನ್ನು ತಿಳಿಸುತ್ತ ವೈಯಾಕರಣ ಸಿದ್ಧಾಂತವನ್ನು ಪ್ರತಿಪಾದಿಸುತ್ತವೆ. ಸ್ಫೋಟವಾದದಲ್ಲಿ ಈತ ಸ್ಫೋಟಾಯನ ಋಷಿಯವಾದವನ್ನು ಪರಿಷ್ಕರಿಸಿ ವಿವರಿಸುವುದಾಗಿ ಹೇಳಿದ್ದಾನೆ. ಇದರ ಪರಿಣಾಮವಾಗಿ ವ್ಯಾಕರಣಶಾಸ್ತ್ರ ಶಬ್ದಬ್ರಹ್ಮೋಪಾಸನೆಯ ಮೂಲಕ ಮೋಕ್ಷದಾಯಕವೆಂಬ ಭಾವನೆ ಲೋಕದಲ್ಲಿ ವ್ಯಾಪಿಸಿದೆ.

	ಇವನ ಗ್ರಂಥಗಳೆಲ್ಲ ಗಂಭೀರವೂ ಅರ್ಥಗರ್ಭಿತವೂ ಆಗಿ ಪಂಡಿತಮಾನ್ಯವಾಗಿವೆ.		
     (ಟಿ.ಜಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ